ಆಲ್ಫ್ರೆಡ್ ಚಾರಲ್ಸ್‌ ಕಿನ್ಸೆ(ಜೂನ್ 23, 1894 – ಆಗಸ್ಟ್ 25, 1956) ಅಮೆರಿಕದ ಜೀವಶಾಸ್ತ್ರಜ್ಞ,ಪ್ರಾಣಿಶಾಸ್ತ್ರ ಮತ್ತು ಕೀಟಶಾಸ್ತ್ರದ ಪ್ರಾಧ್ಯಾಪಕ ಮತ್ತು ಇಂಡಿಯಾನ ವಿಶ್ವವಿದ್ಯಾಲಯದಲ್ಲಿ ಲೈಂಗಿಕಶಾಸ್ತ್ರದ ಅಧ್ಯಯನ ಪೀಠವನ್ನು ಸ್ಥಾಪನೆಮಾಡಿದ ಲೈಂಗಿಕ ವಿಜ್ಞಾನಿ. == ಬಾಲ್ಯ ಮತ್ತು ಜೀವನ == ಅಮೆರಿಕದ ನ್ಯೂಜರ್ಸಿಯಲ್ಲಿ ಹುಟ್ಟಿದ. ಬ್ರನ್ಸ್‍ವಿಕ್, ಹಾರ್ವರ್ಡ್‍ಗಳಲ್ಲಿ ಕಲಿಕೆ ಮುಂದುವರಿಸಿ ಕೊನೆಗೆ 1920 ರಿಂದ 27 ವರ್ಷಗಳ ಕಾಲ ಪ್ರಾಣಿಶಾಸ್ತ್ರ ಪ್ರಾಧ್ಯಾಪಕನಾಗಿದ್ದು, ಆಮೇಲೆ ಕೊನೆಯ ತನಕ ಇಂಡಿಯಾನಾ ವಿಶ್ವವಿದ್ಯಾಲಯದ ಲೈಂಗಿಕ ಸಂಶೋಧನ ಸಂಸ್ಥೆಯ ನಿರ್ದೇಶಕನಾಗಿದ್ದ. == ಅಧ್ಯಯನ == ಲೈಂಗಿಕ ಜೀವನದ ಪದ್ಧತಿ, ರೂಢಿ, ಸಂಪ್ರದಾಯ, ಒಳಗುಟ್ಟುಗಳನ್ನು ಹೊರಗೆಡಹುವುದರಲ್ಲಿ ಇವನಿಗಿದ್ದ ಕಟ್ಟಾಸಕ್ತಿಯಿಂದ ಆ ಸಂಸ್ಥೆ ಹುಟ್ಟಿತು. ಇವನೂ ಇವನ ಸಹೋದ್ಯೋಗಿಗಳು ಸೇರಿ ನಡೆಸಿದ ಶೋಧನೆಗಳ ಫಲವಾಗಿ ಪ್ರಪಂಚದಲ್ಲಿ ಎಲ್ಲೆಲ್ಲೂ ಗಂಡಸರಲ್ಲಿನ ಲೈಂಗಿಕ ವರ್ತನೆ (1948), ಹೆಂಗಸರಲ್ಲಿನ ಲೈಂಗಿಕ ವರ್ತನೆ(1953) ಎಂಬ ಹೆಸರಾದ ಎರಡು ಪುಸ್ತಕಗಳು ಹೊರಬಂದವು. 18,500 ಜನರನ್ನು ಕಂಡು ಗೋಪ್ಯವಾಗಿ ಸಂಗ್ರಹಿಸಿದ ವಿವರಗಳು ಈ ಪುಸ್ತಕಗಳಲ್ಲಿವೆ. ಗಂಡು ಹೆಣ್ಣುಗಳ ಲೈಂಗಿಕ ವರ್ತನೆಗಳಲ್ಲಿ ಎಷ್ಟೊಂದು ಅಭಾಸ, ಏರುಪೇರು, ವಿಚಿತ್ರಗಳಿವೆ ಎನ್ನುವುದನ್ನು ಈತ ವರದಿಮಾಡಿದ್ದಾನೆ. ಇವನ ಇವೆರಡು ವರದಿಗಳ ಆಧಾರದ ಮೇಲೆ ನೂರಾರು ಪುಸ್ತಕಗಳು ಪ್ರಕಟವಾಗಿವೆ. ಇವುಗಳಲ್ಲಿನ ತರ್ಕ, ವಾದ, ರೀತಿ ನೀತಿಗಳನ್ನು ಕಟುವಾಗಿ ಟೀಕಿಸಿದವರೂ ಇದ್ದಾರೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == – ಐ ಎಮ್ ಡಿ ಬಿನಲ್ಲಿ @ ಐ ಎಮ್ ಡಿ ಬಿ